ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯು 1967ರಲ್ಲಿ ತನ್ನ ಕಾರ್ಯ ಆರಂಭ ಮಾಡಿದ್ದು, ದೇಶದ ಹಿರಿಯ ಹಾಗೂ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಲ್ಲೊಂದಾಗಿದೆ. ಸಂಸ್ಥೆಯು ಸುಂದರವಾದ ಹಚ್ಚಹಸಿರಿನ ವಾತಾವರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಏಕಕಾಲದಲ್ಲಿಯೇ 300ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳಿಗೆ ವಸತಿ ಸಹಿತ ತರಬೇತಿಗಳನ್ನು ಆಯೋಜಿಸಲು ಸಾಧ್ಯವಾಗುವಂತಹ ಅಗತ್ಯ ಮೂಲಭೂತ ಸೌಕರ್ಯವನ್ನು ಹೊಂದಿರುತ್ತದೆ. ಸಂಸ್ಥೆಯಲ್ಲಿ ಒಟ್ಟು 17 ತರಬೇತಿ ಕೊಠಡಿಗಳು, 02 ಸಭಾಂಗಣಗಳು ಲಭ್ಯವಿದ್ದು, 600ಕ್ಕೂ ಹೆಚ್ಚು ಮಂದಿಗೆ ಆಸನ ವ್ಯವಸ್ಥೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅಲ್ಲದೇ ಎರಡು ಗಣಕ ಯಂತ್ರ ಲ್ಯಾಬ್‌ಗಳು ಸಹ ಇದ್ದು, 50 ಪ್ರಶಿಕ್ಷಣಾರ್ಥಿಗಳಿಗೆ ಒಟ್ಟಿಗೆ ತರಬೇತಿಯನ್ನು ನೀಡಬಹುದಾಗಿರುತ್ತದೆ.  ಜೊತೆಗೆ ಸಂಸ್ಥೆಯ ಆವರಣದಲ್ಲಿ ಸುಸಜ್ಜಿತವಾದ ಗ್ರಂಥಾಲಯ, ಯೋಗಾ ಕೇಂದ್ರ ಹಾಗೂ ಕ್ರೀಡಾ ಸಮುಚ್ಚಯಗಳು ಸಹ ಪ್ರಶಿಕ್ಷಣಾರ್ಥಿಗಳ ಬಳಕೆಗೆ ಲಭ್ಯವಿರುತ್ತವೆ.

ಆಡಳಿತ ತರಬೇತಿ ಸಂಸ್ಥೆಯು ರಾಜ್ಯ ಸರ್ಕಾರ ನೀಡುವ ಅನುದಾನ ಮಾತ್ರವವಲ್ಲದೇ, ಭಾರತ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (DoPT) ಪ್ರಾಯೋಜಿತ ತರಬೇತಿಗಳು ಹಾಗೂ ವಿವಿಧ ಇಲಾಖೆಗಳ ಕೋರಿಕೆ ಮೇರೆಗೆ ನಡೆಸುವ ಪಾವತಿ ಆಧಾರಿತ ತರಬೇತಿಗಳನ್ನು ಸಹ ಯಶಸ್ವಿಯಾಗಿ ಆಯೋಜಿಸಿ ನಡೆಸುತ್ತಿದೆ. ಈ ನಿರ್ದೇಶನಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 29 ಜಿಲ್ಲಾ ತರಬೇತಿ ಸಂಸ್ಥೆಗಳು ಜಿಲ್ಲಾ ಮಟ್ಟದಲ್ಲಿ ಆಯಾಯ ಜಿಲ್ಲೆಯ ಗುಂಪು ‘ಸಿ’ ಮತ್ತು ‘ಡಿ’ ವೃಂದದ ಸಿಬ್ಬಂದಿ ವರ್ಗದವರಿಗೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿವೆ..

ಈ ಜಾಲತಾಣವು, ಆಡಳಿತ ತರಬೇತಿ ಸಂಸ್ಥೆ ಮತ್ತು ಅದರ ಸಮಗ್ರ ಕಾರ್ಯಚಟುವಟಿಕೆಗಳ ಬಗ್ಗೆ ಸವಿವರ ಮಾಹಿತಿಯನ್ನು ಒದಗಿಸುವುದರೊಂದಿಗೆ, ಪ್ರಸ್ತುತ ಆಯೋಜಿಸಿರುವ ತರಬೇತಿ ಕಾರ್ಯಕ್ರಮಗಳ ವಿವರ, ದೈನಂದಿನ  ಉಪನ್ಯಾಸ ಮಾಡ್ಯೂಲ್‌ಗಳ ಮಾಹಿತಿ, ಲಭ್ಯವಿರುವ ಮೂಲಸೌಕರ್ಯಗಳ ವ್ಯವಸ್ಥೆ, ಜೊತೆಗೆ ಪ್ರಶಿಕ್ಷಣಾರ್ಥಿಗಳು ತರಬೇತಿಯ ಅವಧಿಯಲ್ಲಿಯೇ ಏಕಕಾಲಿಕವಾಗಿ ಮೌಲ್ಯಮಾಪನ ಮಾಡಲು ಅನುಕೂಲವಾಗುವಂತೆ ಇರುವ ವ್ಯವಸ್ಥೆಗಳ ಮಾಹಿತಿಯನ್ನು ಈ ಜಾಲತಾಣದಲ್ಲಿ ಒದಗಿಸಲಾಗಿರುತ್ತದೆ.

ಆಡಳಿತ ತರಬೇತಿ ಸಂಸ್ಥೆಯಲ್ಲಿ ವಿಕೋಪ ನಿರ್ವಹಣಾ ಕೇಂದ್ರ, ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರ, ಇ-ಆಡಳಿತ ಮತ್ತು ದತ್ತಾಂಶ ವಿಶ್ಲೇಷಣಾ ಕೇಂದ್ರ, ಸುಸ್ಥಿರ ಅಭಿವೃದ್ಧಿ ಗುರಿಗಳು ಕೇಂದ್ರ ಹಾಗೂ ಸಾರ್ವಜನಿಕ ಖಾಸಗೀ ಸಹಭಾಗಿತ್ವ ಕೋಶಗಳು ಸಹ ಕಾರ್ಯನಿರ್ವಹಿಸುತ್ತಿದ್ದು. ಈ ಐದು ಕೇಂದ್ರಗಳಿಗೆ ಸಂಬಂಧಿಸಿದ ಇಲಾಖೆಗಳು ಅನುದಾನವನ್ನು ಭರಿಸುತ್ತಿವೆ.

ಆ.ತ.ಸಂ ಮತ್ತು ಸಾರ್ವಜನಿಕರ ನಡುವೆ ಯಾವುದೇ ನೇರ ಸಂಪರ್ಕವಿಲ್ದದಿದ್ದರೂ ಸಹ ಈ ಜಾಲತಾಣದ ಮೂಲಕ ತರಬೇತಿ ಕಾರ್ಯಕ್ರಮಗಳ ಮಾಹಿತಿಯನ್ನು ನಾಗರೀಕರಿಗೆ ಒದಗಿಸುವ ಮೂಲಕ ಅವರಲ್ಲಿ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಆಸಕ್ತಿಯನ್ನು ಹೆಚ್ಚಿಸುವುದು ಈ ಜಾಲತಾಣದ ಒಂದು ಪ್ರಯತ್ನವಾಗಿರುತ್ತದೆ.

ಪ್ರಸ್ತುತ ಜಾಲತಾಣದಲ್ಲಿ ಆಡಳಿತ ತರಬೇತಿ ಸಂಸ್ಥೆಗಳ ಸಹೋದರ ಸಂಸ್ಥೆಗಳಾದ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಹಾಗೂ ರಾಜ್ಯ ನಗರಾಭಿವೃದ್ಧಿ ಸಂಸ್ಥೆಗಳ ಜಾಲತಾಣಗಳ ಕೊಂಡಿಯನ್ನು (link) ಸಹ ಇಲ್ಲಿ ನೀಡಲಾಗಿದೆ.

ಅಂತಿಮವಾಗಿ ದೇಶದ ನಾಗರೀಕರಿಗೆ ಉತ್ತಮ ಆಡಳಿತದ ಮೂಲಕ ಅತ್ಯುತ್ತಮ ಸೇವೆ ಒದಗಿಸುವುದು ಈ ತರಬೇತಿ ಸಂಸ್ಥೆಯ ಪ್ರಾಮಾಣಿಕ ಪ್ರಯತ್ನವಾಗಿದ್ದು, ಈ ನಿಟ್ಟನಲ್ಲಿ ತಮ್ಮ ಪ್ರತಿಕ್ರಿಯೆ/ಸಲಹೆಗಳನ್ನು ಮುಕ್ತವಾಗಿ ಆಹ್ವಾನಿಸುತ್ತೇವೆ. ತಮ್ಮ ಪ್ರತಿಕ್ರಿಯೆ / ಸಲಹೆಗಳನ್ನು ಮಿಂಚಂಚೆ ಮುಖಾಂತರ ಈ ವಿಳಾಸಕ್ಕೆ dgatimysore@gmail.com  ಕಳುಹಿಸಿಕೊಡಲು ಈ ಮೂಲಕ ಕೋರಿದೆ.

 ಶ್ರೀ ಕಪಿಲ್ ಮೋಹನ್ ಭಾ ಆ ಸೇ
ಮಹಾ ನಿರ್ದೇಶಕರು

Font Resize
Contrast